ಮಂಗಳವಾರ, ಜನವರಿ 20, 2015

".ಆ ...ಮೇಲಿನ ಮಾತು!"

"ಗಂಗಾ..ಏ ಗಂಗಾ"..ಯಾರೋ ಕರ್ದಾಂಗಾತು...ಆಂ" ಹೇಳ್ಕ್ಯೋತ ತಿರ್ಗಿ ನೋಡತು ಗಂಗಾ..ಒಂದ್ಸಲ ಭಯಂಕರ
ಆಶ್ಚರ್ಯ !!...ಪೂರ್ತಿ ಇಪ್ಪತ್ತೆಂಟು ವರ್ಷಗಳ ಹಿಂದೆ ಬಿಟ್ಟಿಕ್ಕೆ ಹೋಗಿದ್ದ ಶಣ್ ಹೆಗ್ಡೆ...ಇಂದು ಮತ್ತೊಂದ್ಸಲ ಕರಿತಿದ್ದ!!

'ನಿನ್ನ ಮಗಳು-ಅಳಿಯ ಎಲ್ಲೋ ಹೋಯ್ದ ಕಾಣ್ಸ್ತು..ಬತ್ಯನೆ ಎನ್ನ ಜತಿಗೆ??... ಕೇಳ್ತಿದ್ರು..
 ಒಂದ್ಸಲ ಯೋಚನೆ ಮಾಡ್ತು ಗಂಗಾ.."ಈಗ ಇವರ ಜೊತಿಗೆ ಹೊರಟರೆ ಮಕ್ಕ ಎಂತ ಅಂದ್ಕತ್ವನ... ಅಲ್ದೆ ತಾನು ನಾಲ್ಕು ದಿನದ ಮಟ್ಟಿಗೆ ಮಗಳ ಮನೆಲಿ ವಳ್ಕಂಬ್ಲೆ ಬಂದವ್ಳು..ಇಲ್ಲಿಂದನೇ ಹೊರಟ್ರೆ..ಸರಿ ಆಗತಾ.?"...ಹೇಳ ಹೆದರಿಕೆಯ ಬೆನ್ನಲ್ಲೇ..:ಎನ್ನದೆಂತ ಓಡಿಹೋಪ ಪ್ರಾಯವಾ??.. ಇಲ್ಲೇ ಎಲಾದರೂ ಹೋಗಿಕ್ಕು, ಬತ್ತು ಅಂದ್ಕತ್ತ...ಒಂದ್ಸಲ ಶಣ್ ಹೆಗ್ದೇರನ್ನ ನೋಡ್ತು,,,

ಇವರ ಜೊತಿಗೇ ಅಲ್ಲದಾ?..ತಾನು ಕೈ ಹಿಡ್ಕಂಡು ಸಪ್ತಪದಿ ತುಳಿದಿದ್ದು..?ಬಲಗಾಲಿಟ್ಟು ಒಳಗೆ ಹೋಗಿದ್ದು..ಎನ್ನ ಮಾತ್ರ ನಡುಮನೆಲಿ ನಿಲ್ಲಿಸಿ, ಇವರು ಹೊರಗೆ ನೆಡದ್ರಲ..??
"ಬಾರೇ..ಬೇಗ,,ಯಾರಾದ್ರೂ ಬರ್ಗು ಮಾರಾಯ್ತಿ"..ಮತ್ತೊಂದ್ಸಲ ಕರದ್ರು ಹೆಗಡೇರು..
 ಇನ್ನು ತನಗೆ ಇಲ್ಲೆಂತ ಕೆಲಸಿಲ್ಲೆ ಹೇಳ ಒಂದು ಕ್ಷಣದ ವೈರಾಗ್ಯ , ಗಂಗಾನ್ನ ಹೆಗಡೇರ ಹಿಂದೆ ಹೋಪಾಂಗೆ ಮಾಡ್ತು..

ಹೊರಟ ಹಳೇ ಜೋಡಿ, ಸಿದ್ದಾಪುರದ ಶಂಕರಮಠದ ಪಕ್ಕದ ಗುಡ್ಡ ಹತ್ತದ..ಗಂಗಾ ತನ್ನ ಕವಳದ ಸಂಚಿ ಬಿಚ್ಚತು..ಅಡಿಕೆ ಹೋಲೊಂದಾ ಬಾಯಿಕೆ ವಕ್ಕಂಡ್ರು ಹೆಗ್ಡೇರು.., ಗಂಗಾ ಅಡಿಕೆ ಪುಡಿ ಮಾಡಲೆ ಕಲ್ಲು ಹುಡ್ಕದ್ನ ಕಂಡು.." ಆಗಲೇ ಮುದ್ಕಿ ಆಗೋದ್ಯಲೆ..ಎನ್ನ ನೋಡು, ವಯಸ್ಸು ಎಪ್ಪತ್ತೆಂಟಾದರೂ ಇನ್ನೂ ಐವತ್ತು ವರ್ಷದವನಾಂಗೆ ಇದ್ದಿ.." ಎದೆಯುಬ್ಬಿಸಿ ನೆಗ್ಯಾಡದ್ರು..
" ಹೂಂ..ಇರದೇ ಎಂತು,,ಎನ್ನ ಬಿಟ್ಟಿಕ್ಕೆ ಓಡೋಪಕರೆ ನಿಮಗೆ ಐವತ್ತೆ ಆಗಿದ್ದಲ್ದಾ??..ಆಮೇಲೆ ಎನ್ನ ಪಾಡನ್ನ ಒಂದ್ಸಲನಾದ್ರೂ ವಿಚಾರಿಸಿದ್ರ??..ನಿಮ್ಮ ಬಂಧುಗಳೆಲ್ಲ ಎನ್ನ ಪಾಲಿಗೆ ಬಂದೂಕೇ ಆಗೋದ..ಎಲ್ಲಾ ಕಷ್ಟನೂ ಎನಗೇ,,ನಿಮಗೆಂತಾ ಇತ್ತು ಹೇಳಿ,, ಅದಕೇ ಹಾಂಗೆ ಇದ್ದಿ ನೀವು" ಸಿಡಕೇಬುಡ್ತು ಗಂಗಾ..
"ಹೋಗ್ಲಿ ಬಿಡೆ,,, ಮಕ್ಕಳೆಲ್ಲಾ ಹ್ಯಾಂಗಿದ್ವೆ?..
 ಮಕ್ಕಳ ಸುದ್ದಿ ಬಂದ್ಕೂಡಲೇ ಹನೀ ತಣ್ಣಗಾತು ಗಂಗಾ.."ಹೆಣ್ಣುಡ್ರಿಗೆಂತದು..ಎಲ್ಲಾ ಆರಾಮಿದ್ದ..ಎಲ್ಲಾ ಅಳಿಯಂದಿಕ್ಕನೂ ಗನಸ್ತರೇಯ.. ಈಗಂತೂ ಎಲ್ಲಾರ ಮನೇಲೂ ಕಾರಿದ್ದು,, ನೀವಿರಕರೆ ಹೋಗ್ತಿದ್ವಲ,,ಹಾಂಗೆಯ.."

ಶಣ್‍ಹೆಗಡ್ರಿಗೆ ಒಂದ್ಸಲ ಮನಸು ತುಂಬಿಬಂತು..ಅವರಿಗೆ ಹೆಣ್ಣುಮಕ್ಕಳ ಮೇಲೆ ಒಂದುಚೂರು ಪ್ರೀತಿ ಜಾಸ್ತಿನೆಯ ಯಾವಾಗ್ಲುವ.. ಮತ್ತೆ ..'ಗಂಡುಹುಡಗ್ರೂ.." ತಡವರಿಸಿದ್ರು,,ಒಂದ್ಸಲ..
"ನಮ್ಮನೆ ಗಂಡುಮಕ್ಕಳೆಲ್ಲಾ ಸಂಭಾವಿತರೇ ಸೈ..ಸುಳ್ಳು-ಪಳ್ಳು ಮೋಸ, ವಂಚನೆ ತಿಳಿಯಗಿದ್ದವು.. ಆದರೂ ಸರಿಯಾದ ವಯಸ್ಸಲ್ಲಿತಿಳುವಳಿಕೆ ಹೇಳರಿಲ್ಲದೆ ಕಣ್ಕಟ್ಟಿ ಕಾಡಲ್ಲಿ ಬಿಟ್ಟಾಂಗಾತು...ನೀವು ಹಾಂಗೆ ಎದ್ದು ಹೋಪದಲ್ದಾಗಿತ್ತು ಅವತ್ತು.."ಮಾತಲ್ಲೇ ತಿವಿತು ಗಂಗಾ.. ಮತ್ತೊಂದಸಲ ನಿಟ್ಟುಸಿರುಟ್ಟು,,ಸುಮ್ಮಂಗಾದರು ಹೆಗ್ಡೇರು..
"ಅಲ್ಲ ..ಎನ್ನ ತಮ್ಮಂದಿಕ್ಕೊಗೆ ಎನ್ನ ಕಂಡ್ರೆ ಎಷ್ಟು ಪ್ರೀತಿ-ಗೌರವ ಇತ್ತಲೆ.....
"ಹೌದೌದು...ಅದೆಲ್ಲಾ ನಿಮ್ಮ ಕಣ್ಣೆದ್ರಿಗೆ,,ನಿಮ್ಮ ಹತ್ರ ಎಲ್ಲ ದೋಚತನಕ ಮಾತ್ರ..ಕೊನೆಗೆ ಉಳಿದವು ಆನು ಮತ್ತೆ ಎನ್ನ ಮಕ್ಕಳು..ನೀವೂ ಇದ್ದಿದ್ರಿಲ್ಲೆ..,"ಗಾಬರಿಯಿಂದ ನೋಡಿದ್ರು ಹೆಗ್ಡೆರು..
"ಹೆದ್ರಡಿ.. ನಿಮ್ಮ ದಯಾದಿಗಳ ಕಿತಾಪತಿ ನದುವೆನೂ  ಕಾಲೂರಿ ನಿಂತಿ ನಾನು,,ಗಂದುಮಕ್ಕಳು ವೈಭವದಿಂದ ಇಲ್ದೇಗಿದ್ರೂ ಗೌರವವಾಗೇ ಬಾಳ್ತಿದ್ದ... ಸೊಸೆಯರೂ ಗನಾವೇಯ.." ನಮ್ಮ ಮೂರನೇ ಮಗ ಪರದೇಶಕ್ಕೆಲ್ಲ ಹೋಗಿ ಬಂದ.. ಎನ್ನನ್ನೂ ಕರದ.."
" ನೀ ಹೋಯ್ದಿಲ್ಯನೆ??..ಹೆಗ್ಡೆರ ಕುತೂಹಲದ ಜೊತಿಗೆ ಹನೀ ಹೊಟ್ಟೆಕಿಚ್ಚೂ ಇತ್ತು...
"ನಿಮಗೆ ಎನ್ನ ಗುಣ ಗೊತ್ತಿಲ್ಯ??.. ನನಹೆ ಮನೆಯೇ ಕಾಶಿ,,, ಬಚ್ಚಲ ಹಂಡೆ ನೀರೇ ಭಾಗೀರಥಿ" ನಾನೆಲ್ಲಿಗೂ ಹೋಯ್ದ್ನಿಲ್ಲೆ..ನೆಗ್ಯಾಡ್ತು ಗಂಗಾ..
"ಆದರೆ ಎಂಗೆ ನಮ್ಮ ಕಡೆ ಮಗ ರಾಜುಂದೇ ತಲೆಬಿಶಿ,, ಎಲ್ಲೂ ಹೆಣ್ಣೆ ಶಿಕ್ತಾ ಇಲ್ಲೆ.. ಗನಾ ಮಾಣಿ ಆದ್ರೂ..ಮನೆಲಿಪ್ಪವ ಹೇಳಿ...ಮದ್ವೆ ಆಪ್ದೇ ಕಷ್ಟ.ುಳಿದ ಮಕ್ಕಳೆಲ್ಲ ಗನಾವೆಯ..ಅವಂಗೆ ಎಂತ ತಂದರೆ ಆಪಾಂಗಿಲ್ಲೆ ಹೇಳಿ ಕಣ್ಣೀರ ವರ್ಸ್ಕ್ಯಂಡ ಗಂಗನ್ನ ನೋಡಿದ್ರು ಹೆಗ್ಡೆರು..
ರಾಶಿ ಸೋತೋಯ್ದು ತನ್ನ ಗಂಗಾ ಅನ್ನಿಸ್ತು,, ಮುಖದ ಸುಕ್ಕು, ಬಿಳೀಕೂದಲು, ಅವಳು ಅನುಭವಿಸಿದ ನೋವನ್ನು ಹೇಳತು,,ಆದರೂ ಕಣ್ಣು, ಕಿವಿ ಎಲ್ಲಾ ಇನ್ನೂ ಸೂಕ್ಷ್ಮವಾಗೆ ಇದ್ದಕು,,ಸೊಂಟ ಬಾಗಿದ್ರೂ..ಮೈ ನದುಗ್ತಾ ಇಲ್ಲೆ.. ನಿಂಬೆಹಣ್ಣಿನ ಮೈಬಣ್ಣ ಸ್ವಲ್ಪ ಮಾಸಿದ್ದರೂ, ಬೆಳ್ಳಗಿನ ಸೀರೆಯಲಿ ಚೊಲೊನೆ ಕಂಡ್ತು ಗಂಗಾ..
ಶ್ರೀಮಂತರ ಮನೆಯ ಒಬ್ಬಳೇ ಮಗಳು ಗಂಗಾ.. ತಾನೆಂತ ಕಡಿಮೆ ಶ್ರೀಮಂತನ??... ಹದಿಮೂರೆಕರೆ ತೋಟ,ವಿಭಕ್ತ ಕುಟುಂಬದ ಯಜಮಾನ.. ಆಳು ಕಾಳು, ಬಪ್ಪರು ಹೋಪರು.,,ಎಲ್ಲಾ ಇದ್ದು ಹೇಳ ಸೊಕ್ಕಿನಲ್ಲಿ ಮಕ್ಕಳಿಗೆಂತ ಮಾಡ್ಗ್ಗಿದ್ದಿದ್ದೆ ತಪ್ಪಾತ??.. ತಮ್ಮಂದಿಕ್ಕಳ ಮೇಲೆ ಇಟ್ಟ ವಿಶ್ವಾಸ ಜಾಸ್ತಿ ಆತ??...ತಾನು ಮನೆಬಿಟ್ಟಿಕ್ಕೆ ಹೋಗಿದ್ದು ಅಕಸ್ಮಾತೇನಲ್ಲ..ಮೊದಲೇ ಗೊತ್ತಿದ್ದಿದ್ದೇಯ,, ಆದರೂ ಹಾಂಗೆ ಬಂದ್ಬುಟಿ...ತನ್ನ ಬದುಕಿನಲ್ಲಿ ಆ ಒಂದು ಘಟನೆ ನಡ್ಯದ್ದೇ ಇದ್ದಿದ್ರೆ??''
ಗಂಗಾ ಅನುಭವಿಸಿದ ಕಷ್ಟ, ಒಂಟಿತನ ಎಲ್ಲ ತನಗೆ ಗೊತ್ತಿಲ್ಲದೆ ಇದ್ದಿದ್ದೇನಲ್ಲ.. ತಾನು ಅವತ್ತು ಮನೆಬಿಟ್ಟಿಕ್ಕೆ ಹೋಪಕರೆ ಗಂಗಂಗೆ ಬರೀ ನಲವತ್ತೈದು  ವರ್ಷ.. ಮನೆತುಂಬಾ ಮಕ್ಕಳು,, ಹ್ಯಾಂಗೆ ಲೆಕ್ಕ ಹಾಕಿದ್ರೂ ಪೂರಣಾಂಕ..ಎಂಟು!!..ನಾಲ್ಕು ಮತ್ತು ನಾಲ್ಕು.. ಕಡೆ ಮಗಂಗಂತೂ ಹಾಸಿಗೇಲಿ ಉಚ್ಚೆ ಮಾದ್ಕ್ಯಂಬ ವಯಸ್ಸಪ್ಪ.. ನಂತರ... ಎಲ್ಲವೂ ಕನಸಿನಾಂಗೆ ಆಗೋತು... ಮನೆಲಿದ್ದ ಬಂಗಾರ ಮಾಯ... ಆಸ್ತಿ ಎಲ್ಲ ಪೂರ್ತಿ ದಾಯಾದಿಗಳ ಹೆಸರು...ಗಂಗಂಗೆ ಹುಚ್ಚು ಹಿಡ್ಯಗಿದ್ದಿದ್ದೆ ಹೆಚ್ಚು,,,ತಾನಾದ್ರೂ ಎಂತ ಮಾಡಾಂಗಿದ್ದಿದ್ದಿ??..
"ಆ ಘಟನೆ ಆಗದೆ ಇದ್ದಿದ್ರೆ...!"..ಮತ್ತೊಂದ್ಸಲ  ಹೆಗ್ದೇರ ಸ್ವಗತ,,,
 ನಿರ್ವ್ವಿಣ್ಣರಾಗಿ ಕೂತ ಹೆಗ್ಡೇರ ನೋಡಿ ಗಂಗಂಗೆ "ಪಾಪ" ಆನಿಸ್ತು..
ಹೋಗ್ಲಿ ಬಿಡಿ..ಎಂತಕೆ ಬೇಜಾರು??..  ಈ ಇಪ್ಪತ್ತೆಂಟು ವರ್ಷ ಒಂಟಿತನ ಕಷ್ಟ ಆಗಿದ್ದು ಹೌದು.. ಆದರೆ ನಾ ಹೆದರಿದ್ನಿಲ್ಲೆ.. ಕಳೆದು ಹೋಗಿದ್ದರ ಬಗ್ಗೆ ಚಿಂತೆ ಮಾಡಿದ್ನಿಲ್ಲೆ...ಯಾರಿಗೂ ಶಪಿಸಿದ್ನಿಲ್ಲೆ..ಎಂತ ಇದ್ರೂ ಈ ಜನ್ಮದಲ್ಲೇ ಮುಗ್ಸವು, ಮುಂದಿನ ಜನ್ಮವೇ ಬ್ಯಾಡ  ಹೇಳಿ ಮನಸು ಗಟ್ಟಿಮಾದ್ಕ್ಯಂಡಿ.." ಅದೇ ನಿಮ್ಮ ತಮ್ಮ ಎಂಗೆ "ಲೇಡಿ ಮೋದಿ" ಹೇಳ ಬಿರುದು ಕೊಟ್ಟಿದ್ದ.."ಜೋರಾಗಿ ನೆಗ್ಯಾಡಿ, ತಟ್ಟನೇ ಕಣ್ಣು ವರ್ಸ್ಕ್ಯಂಡ್ತು ಗಂಗಾ..

ಹೌದು..ಇದೆಲ್ಲ ತನಗೆ ಗೊತ್ತಿದ್ದೆ ಅಲ್ದ!!. ಗಂಗಂಗೆ ಹೊಲಿಗೆ, ಕಸೂತಿ, ಅಡುಗೆ ಮಾಡದು ಮೊದ್ಲಿನಿಂದಲೂ ಖುಷಿನೇ ಅಲ್ದಾ..ಈಗಲೂ "ಅಡುಗೆ ಗಂಗಕ್ಕ" ಹೇಳೆ ಕರಿತ ಹೇಳಿ ಹೋದವರ್ಷ ತನ್ನಹತ್ರ ಬಂದ ಗೋವಿಂದಭಾವನೂ ಹೇಳಿದ್ನಿಲ್ಯ?..

"ಬಿಡಿ..ಈಗೆಲ್ಲ ಚೊಲೊನೆ ಇದ್ದು..ಮಕ್ಕಳೆಲ್ಲ ಹೊಂದ್ಕ್ಯಂಡು, ಖುಶಿಲಿದ್ದ,, ನಾನೂ ನನ್ನ ಯಾವ ಕರ್ತವ್ಯನೂ ಉಳ್ಸಿದ್ದಾಂಗೆ ಕಾಣ್ಸ್ತಾ ಇಲ್ಲೆ..ಅದಕ್ಕೆ .. ನೀವು ಕರೆದಕೂಡಲೇ ಬಂದ್ಬುಟ್ಟಿ..."ಹೇಳಿದ ಗಂಗಾನ ಧ್ವನಿಯಲ್ಲಿ ಹೆಮ್ಮೆ ಇತ್ತು..ಹೆಗ್ಡೆರು ಅರ್ಧಕ್ಕೆ ಬಿಟ್ಟಿಕ್ಕೆ ಬಂದ ಕೆಲಸ ಎಲ್ಲ ಪೂರ್ತಿ ಮಾದ್ದ ತೃಪ್ತಿ ಇತ್ತು..
ತಲೆ ತಗ್ಗಿಸಿ ಕುಳಿತ ಶಣ್‍ಹೆಗ್ಡೆರ ಮುಖದಲ್ಲಿ ವಿಷಾದವಿತ್ತಾ??...ಅಥವಾ ಗಂಗಾ ತನ್ನ ಹತ್ತಿರ ಬಂದಿದ್ದಕ್ಕೆ ಸಂತಸ ಇತ್ತಾ??
 ಗೊತ್ತಿಲ್ಲೆ...

ಜೋರು ಮಳೆಗಾಲದಲ್ಲಿ ಹೆಗ್ಡೇಮನೆ ಗಂಗಕ್ಕ ಮಗಳ ಮನಿಗೆ ಹೋಗಿದ್ದು.ಮನ್ಕ್ಯಂಡಿದ್ದಿದ್ದು ಹಾಂಗೇ ಸತ್ತೋತಡ.ಸುಖಮರಣ..... ಬಿಳಗಿ ಸೀಮೆಲಿ ಮರುದಿನ ಎಲ್ಲಾ ಸುದ್ದಿ..

ಭಾನುವಾರ, ಡಿಸೆಂಬರ್ 21, 2014

ರಂಗ-ರಾತ್ರಿ-ರಾಧೆ...






ನೂರೆಂಟು ಕನಸುಗಳ ಚಿತ್ತಾರ ರಾತ್ರಿಯೆಲ್ಲಾ..
ಪಕ್ಕದಲಿ ನೀ ಬಂದು ಕುಳಿತಂತೆ..
ಹೂವು ಮುಡಿಸಿದಂತೆ...
ಒಮ್ಮೆ ಮುದ್ದಿಸಿದಂತೆ...
ಕದ್ದು ಎದೆಯ ಭಾವ
ಒಮ್ಮೆಗೇ ಮಾಯವಾದಂತೆ...

ಮೋಹಗೊಂಡೆನೊ ಹೇಗೆ
ಕಾರಿರುಳ ರಾತ್ರಿಯಲಿ...
ನೀರವ ಬೃಂದಾವನ..
ಮನೆಯೊಳಗೆ ಆರಿದ ಹಣತೆ..
ಸಂತಸವಿಲ್ಲ ಎಲ್ಲೆಲ್ಲೂ..
ಯಮುನೆಯ ತಟದಲ್ಲಿ ಬರೀ ವಿರಹಗೀತ....

ಮೊನ್ನೆಮೊನ್ನೆಯ ತನಕ ಇಲ್ಲೆ ಇದ್ದವ ನೀನು,,
ಇಂದು ಎಲ್ಲಿಹೆ ಕೃಷ್ಣ ಮರೆತು ನಿನ್ನ ರಾಧೆಯನ್ನು...
ಕೊಳಲು ಕಾಯುತಲಿದೆ..
ಕೊರಳು ಸೋಲುತಲಿದೆ..
ಮತ್ತೊಮ್ಮೆ ಬಾ ಒಲವೆ...
ಮನವೇಕೊ ಹೇಳುತಿದೆ...ದಿನಹೆಚ್ಚು ಉಳಿದಿಲ್ಲ ನನಗೆ.....
......

ಸಿಗಲಾರದ ಚಂದಿರ..




ಬಾವಿಯಾಳದಿಂದ ನೀನು
ನೀರಿನೊಡನೇ ಎದ್ದುಬಂದೆ...
ಇನ್ನೇನು..
ಕೈಗೆ ಸಿಕ್ಕಿಬಿಟ್ಟೆ ಎನ್ನುವಾಗ
ದೂರದ ಆಗಸದಲ್ಲಿ ಹೋಗಿ ನಗುವುದೆ??
ಓಡಿದರೆ ಜೊತೆಗೆ ಓಡುವ ಕಳ್ಳ
ನಿಂತರೆ ಅಲ್ಲಿಯೆ ನಿಲ್ಲುವೆಯಲ್ಲ..
ಕೂಗಿದರೆ ಮಾತ್ರ..
ಮಾತು ಬಾರದವನಂತೆ
ಬೆನ್ನು ತಿರುಗಿಸಿ ಹೋಗುವ ಮಳ್ಳ...
ಎಲ್ಲರಿಗೂ ಸಿಗದ ಚಂದಿರನು ನೀನು..
ಸಿಗುವೆ ಕೆಲವರಿಗೆ,, ಬೆಳ್ದಿಂಗಳ ಪ್ರೀತಿಯಾಗಿ,
ಬೆಳ್ಳಿ ನಗೆಯಾಗಿ-ಉಲ್ಲಾಸದ ಕ್ಷಣವಾಗಿ..
ಸಿಕ್ಕರೂ ಅಪೂರ್ಣ..
ಚುಕ್ಕಿ ಚೂರಂತಾಗಿ..
ರಂಗೋಲಿ ಎಳೆಯಾಗಿ
ಬೆಳೆದು ಹುಣ್ಣಿಮೆಯಾಗಿ...
ಪೂರ್ಣವಾದೆ ಅನ್ನುವಾಗ..
ಅಮವಾಸ್ಯೆಯಲಿ ಕರಗಿ..
ಆದರೂ..
ಆಕಾಶ ನಿನ್ನದೊಂದೇ ಅಲ್ಲ..
ರಾಶಿ ರಾಶಿ ಚುಕ್ಕಿ ಗೊಂಚಲಿದೆಯಲ್ಲ,,
ಇರುವ ನೀನು ಎಲ್ಲರಿಗೂ ಸಿಗಲೇಬೇಕೇನು??
ಬದುಕಬಹುದಲ್ಲ,,,ಸಿಗದಿದ್ದರೂನು....

ಶನಿವಾರ, ಆಗಸ್ಟ್ 30, 2014

ಸುಖಸಂಸಾರಕ್ಕೊಂದೇ ಸೂತ್ರ



ರಾಮಮಾವ ಸೀತತ್ತೆ...ಇಡೀ ಊರಿಗೆ ಹಿರಿತಲೆಗಳು..... ಮೊನ್ನೆಮೊನ್ನೆ ಮದುವೆಯ ಅರವತ್ತನೇವರ್ಷದ ಆನಿವರ್ಸರಿ ಮುಗ್ಸಿ, ಸಹಸ್ರ ಚಂದ್ರದರ್ಶನದ ಹವನ,ಹೋಮ ಕಾರ್ಯಕ್ರಮ ಮುಗ್ಸ್ಕ್ಯಂಡವು...ಹೆಸರಿನಂತೆ ಒಂಥರಾ ಆದರ್ಶ ದಾಂಪತ್ಯ.. ಇಡೀ ಊರಿಗೆ ಗಂಡ-ಹೆಂಡತಿ ಅಂದರೆ ರಾಮಮಾವ, ಸೀತತ್ತೆ ಹಾಂಗಿರವು ಹೇಳ ಮಾತೂ ಇದ್ದು...ಇದ್ದಿದ್ದೂ ಹಾಂಗೆಯ... ಅವರ ಮಧ್ಯೆ ಎಂತದೂ ಗುಟ್ಟೆ ಇತ್ತಿಲ್ಲೆ... ಸೀತತ್ತೆಯ ಅಪ್ಪನ ಮನೆಲಿ ಕೊಟ್ಟ ಶಣ್ಣ ಮರದ ಪಿಟಾರಿ ಒಂದು ಬಿಟ್ಟು... ಅದರ ಚಾವಿ ಎಷ್ಟು ಸಲ ಕೇಳಿದ್ರೂ ಅದು ಕೊಟ್ಟಿದ್ದೆ ಅಲ್ಲ...

ಹೀಂಗಿಪ್ಪಕರೆ,,, ಸೀತತ್ತೆಗೆ ಇದ್ದಕ್ಕಿದ್ದಂತೆ ಜೋರು ಜ್ವರ... ಸುಸ್ತು.. ನೋಡಲೇ ಆಗಗಿದ್ದದಷ್ಟು ಸೋತೋತು,,,ಪಾಪ, ಡಾಕ್ಟರು ಕೂಡ ಇನ್ನು ಸೀತತ್ತೆ ಆಸೆ ಬಿಡದೇ ಒಳ್ಳೇದು ಹೇಳಿ ಸೂಕ್ಷ್ಮವಾಗಿ ಹೇಳಿದ್ರು... ಆಗ, ಮಧ್ಯಾನಮೆಲೆ ಚಾ ಕುಡ್ದಾದಮೇಲೆ, ರಾಮಮಾವ ಕೇಳದ.."ಕೇಳ್ಚನೆ,,ಸೀತೆ... ಇಷ್ಟು ವರ್ಷ ಸಂಸಾರ ಮಾಡ್ಕ್ಯ ಬಂದಾತು...ಆದ್ರೆ ಎನಗೆ ನೀನು ನಿನ್ನ ಪಿಟಾರಿ ಚಾವಿ ತೆಗ್ಯಲೆ ಮಾತ್ರ ಕೊಟ್ಟಿದ್ದೇ ಇಲ್ಲೆ.....ಎನ್ನ ಹತ್ರ ಇನ್ನೂ ಎಂತ ಗುಟ್ಟೇ ಮಾರಾಯ್ತಿ..?" ಸೀತತ್ತೆ ತಗಬನ್ನಿ ಪಿಟಾರಿನ..., ಹೇಳಿ ತನ್ನ ಕರಿಮಣಿಸರದಲ್ಲೆ ಇಟ್ಕಂಡಿದ್ದ ಚಾವಿ ಕೊಟ್ತು....ಬೀಗ ತೆಗಿರಿ ,, " ಅಂತು..
ಪಿಟಾರಿ ಬೀಗ ತೆಗೆದ ರಾಮಮಾವಂಗೆ ಎರಡು ಮಪ್ಲರು, ಮತ್ತೆ ಇಪ್ಪತೈದು ಸಾವಿರ ರೂಪಾಯಿ ಶಿಕ್ತು,,, ಇದರನ್ನ ಎಂತಕೆ ಯನ್ನ ಹತ್ರ ಮುಚ್ಚಿಡ್ತಪ??..ಹಾಲು-ಮಜ್ಗೆ-ತುಪ್ಪದ ದುಡ್ಡಾಗಿಕು..ಹೇಳಿ ಅಂದ್ಕೊತ್ತಿಪಕರೆ..ಸೀತತ್ತೆ ಅಂತು...
"
ಕೇಳದ್ರ..ಯನ್ ಮದ್ವೆ ಆಪಕಾರೆ ಯಮ್ಮನೆ ಅಮ್ಮಮ್ಮ ಹೇಳಿತ್ತು..ತಂಗಿ , ಗಂಡನ ಹತ್ತರ ಯಾವಾಗ್ಲೂ ಜಗಳ ಮಾಡಡ, ಮಾತಿಗೆ ಮಾತು ಬೆಳದ್ರೆ, ಚೊಲೊ ಸಂಸಾರ ಹಾಳಾಗಿ ಹೋಗ್ತು,,ಏನಾದ್ರೂ ನಿನಗೆ ಯಜಮಾನನ ಮೇಲೆ ಶಿಟ್ಟು ಬಂತ... ಒಂದು ಮಪ್ಲರ್ ಹೆಣಿ.. " ಹೇಳಿ ಇನ್ನೊಂದ್ಸಲ ಕೆಮ್ಮತು..

ರಾಮಮಾವಂಗೆ ದುಃಖ ತಡ್ಕಂಬ್ಲೇ ಆಜಿಲ್ಲೆ...ಪಿಟಾರಿಲಿ ಇದ್ದಿದ್ದು ಬರೀ ಎರಡು ಮಪ್ಲರ್ರು... ಅಂದರೆ ಈ ಅರವತ್ತು ವರ್ಷದ ಸಂಸಾರದಲ್ಲಿ ಸೀತೆಗೆ ತನ್ನ ಮೇಲೆ ಸಿಟ್ಟು ಬಂದಿದ್ದು ಬರೀ ಎರಡೇ ಸಲ.. ಎಷ್ಟು ಪ್ರೀತಿ ತನ್ನ ಮೇಲೆ ,, ಕಂಠ ಭಾರವಾತು.
"ಸೀತೆ.." ಹೇಳಿ ಕರದ,,ಪ್ರೀತಿಯಿಂದ.. "ಅಂದರೆ ಯನ್ಮೆಲೆ ಇಷ್ಟು ವರ್ಷದಲ್ಲಿ ಸಿಟ್ಟು ಬಂದಿದ್ದು ಎರಡೇ ಸಲವನೆ???.".. ಆದರೆ, ಅಷ್ಟು ದುಡ್ಡು ಎಲ್ಲಿಂದ ಮಾಡದ್ಯೆ??"
ಓಹ್..ಅದಾ??..ಸೀತತ್ತೆ ಅಂತು,,".ಅದು ಮಪ್ಲರ್ ಮಾರಾಟ ಮಾಡಿ ಬಂದ ದುಡ್ಡು..."!!!!

ಶುಕ್ರವಾರ, ಸೆಪ್ಟೆಂಬರ್ 20, 2013

ಕವನ


      ಯಮುನಾ ತೀರದಲ್ಲಿ....




                         
                        ಅವನಿದ್ದ ಗೊಲ್ಲ, ಅವಳ ನಲ್ಲ.
                        ಇಂಥದೆ ಬೆಳದಿಂಗಳು,ಅದೇ ಯಮುನೆ...
                        ಅವಳುಡಿಯಲ್ಲಿ ಹೊಳೆವ ನಕ್ಷತ್ರಗಳು
                        ಬೆಳಕಿನುದ್ದಕ್ಕೂ ಬೆಳ್ಳಕ್ಕಿ ಸಾಲು
                        ಕೊರಳ ನಾದದಲ್ಲಿ ಕೊರಳ ದನಿ ತುಂಬಿ,
                        ದಿಕ್ಕುಗಳೆ ಸೋತು ಮೈಮರೆತು ಗಳಿಗೆ,
                        ಅರಳಿತೊಂದು ಪ್ರೇಮ ಕಾವ್ಯದ ಅನುರಣಿಕೆ.

                        ಎಷ್ಟೊಂದು ಚಿತ್ರ, ಎಷ್ಟೊಂದು ಕನವರಿಕೆ,
                        ಕ್ಷಣಕ್ಷಣಕ್ಕೂ ರೇಖೆ ಬದಲಿಸುವ ರಂಗವಲ್ಲಿಯಂತೆ.
                        ಅವನ ಕರಕುಶಲತೆಯಲ್ಲಿ ಅರಳಿಕೊಂಡವೆಷ್ಟೊ ಕಸೂತಿ.
                        ಅವಳೊಂದು ಕಲಾಕೃತಿ, ಅವನೋ ಕಲೆಗಾರ.


                        ಮತ್ತವರು ಕಾಣಲೇ ಇಲ್ಲ, ಆ ಯಮುನೆಯ ತೀರದಲ್ಲಿ.
                        ಕಳೆದುಹೋದವನ ಹುಡುಕುತ್ತ ನಡೆದಳಾ ಚಲುವೆ,
                        ಹುಡುಕಿದಾ ದಾರಿಯೇ ಕಲ್ಲಾಯಿತಂತೆ,
                        ಆಕೆ ಹಾಕಿದಾ ರಂಗವಲ್ಲಿಯೇ ರಂಗಾಯಿತಂತೆ,
                        ಯಾವುದೋ ನೆಲ ನೆತ್ತರಲ್ಲಿ ಮಿಂದು ಕೆಂಪಾಯಿತಂತೆ.

                        ಮೊನ್ನೆ ಅವ ಬಂದ, ಆಕೆಯೂ ಇದ್ದಳು,
                        ಸಹವರ್ತಿಯಾದ ಸಮರೇಖೆಗಳಂತೆ...

                        ಕಣ್ಣಲ್ಲಿ ಮೊದಲ ಒಲವಿತ್ತೆ? 
                        ತಿಳಿಯಲೆಂತು ಅವರ ಭಾವದಾಳಗಳನು...
                        ಪರದೆ ಬದಲಿಸಿದ ಕಾಲದ ಹೊಸ ರಂಗಸಜ್ಜಿಕೆಯಲ್ಲಿ,
                        ಮತ್ತೆ ಮೂಡಬಹುದೆ ಹೊಸತು ಪಾತ್ರ?
                        ಪ್ರೀತಿಯ ಜೊತೆಯಲ್ಲೇ ಜೀವನದ ಯಾತ್ರ?...                     

ಬುಧವಾರ, ಜನವರಿ 23, 2013

ಒಮ್ಮೆ ಸತಾಯಿಸುತ್ತೇನೆ....





ನೀ, ನನ್ನ ಅನುಮತಿ ಕೇಳಿದ ಘಳಿಗೆಯೇ
ಸಮ್ಮತಿಸು ಎನ್ನದಿರು ಇನಿಯಾ...
ಬದುಕಿನಲ್ಲೊಮ್ಮೆ ದಕ್ಕುವ 
ಮಧುರತೆಯೂ ಕೈ ಜಾರಿ ಹೋದೀತು...
ಒಮ್ಮೆ ಸತಾಯಿಸುತ್ತೇನೆ...
ಕೊಸರಿಕೊಂಡು ನಿನ್ನ ತೆಕ್ಕೆಯ....

ನಿನ್ನ ನೆನಪಲ್ಲೇ ಬೆಂದು ಹೋಗುತ್ತೇನೆ...

ನನ್ನ ಮನದ ಕುಲುಮೆಯಲ್ಲಿ ನೀನೇ ಚಿನ್ನ...
ನಾ ಬೆಂದಷ್ಟೂ ನಿನ್ನ  ಹೊಳಪು ಹೆಚ್ಚು...
ಚಿನ್ನ, ಚಿನ್ನಾ..ಎನ್ನುತ್ತಲೇ 
ಒಮ್ಮೆ ಸತಾಯಿಸುತ್ತೇನೆ...
ಕೊಸರಿಕೊಂಡು ನಿನ್ನ ತೆಕ್ಕೆಯ... 

ಬದುಕು ತುಂಬುವ ನಿನ್ನ ಪ್ರೀತಿ..

ಕಣ್ಣು ತುಂಬುವ ನಿನ್ನ ಕಂಗಳ ಹೊಳಪು,
ದಕ್ಕಿದ ಮೇಲೆ ಸತಾಯಿಸಲಾರೆ...
ನೀನು ನನ್ನವನು...
ಎನ್ನುತ್ತ ಸುಮ್ಮನೆ ಸಮ್ಮತಿಸುತ್ತೇನೆ
ನಿನ್ನ ತೆಕ್ಕೆಯೊಳಡಗುತ್ತ...

ಶುಕ್ರವಾರ, ಡಿಸೆಂಬರ್ 7, 2012

"ಅವನ ನೆನಪೆಂದರೆ..."


   

       "ಅವನ ನೆನಪೆಂದರೆ..."

ಅವನ ನೆನಪೆಂದರೆ...
ಸೋನೆ ಮಳೆಯ ನಡುವೆ ಬರುವ ಸೂರ್ಯನ ಬೆಳಕ
ಸಪ್ತವರ್ಣದ ಕಾಮನಬಿಲ್ಲು..!.

ಅವನ ನೆನಪೆಂದರೆ...
ಹಿಮಾಲಯದ ಬೆಟ್ಟದ ತಲೆಯ ಮೇಲೆ ಬಳಿಸಾರುವ ಬಿಳಿಮೋಡದ ಹೆಗಲುತಾಕಿ..
ಮೈ ಪುಳಕ...!

ಅವನ ನೆನಪೆಂದರೆ...
ತೊರೆಯ ನವಿರು ತಿಳಿನೀರ ಒಳಗೆ ಇಳಿದ ಕಾಲ್ಗಳ ಕೆಳಗೆ
ಮೀನುಮರಿಗಳ ಗುಳುಗುಳು ಕಚಗುಳಿ...!

ಅವನ ನೆನಪೆಂದರೆ..
ಮಳೆಗಾಲದ ಛಳಿ ರಾತ್ರಿಯ ಬಿಸಿ ಹಪ್ಪಳದ ಕುರುಕುಗಳ ಜೊತೆಯಲ್ಲಿ
ಹದ ಬೆಂಕಿಯ ಕಾವು..!.

ಅವನ ನೆನಪೆಂದರೆ...
ತಂಪಾದ ಬೆಳದಿಂಗಳ ರಾತ್ರಿಯಲಿ ತೇಲಿ ಬರುವ
ಸಂಪಿಗೆಯ ಗಂಧ...!

ಅವನ ನೆನಪೆಂದರೆ...
ಎಲ್ಲರ ನೆನಪುಗಳು ಮರೆತೇ ಹೋದರೂ..
ಎಲ್ಲಾ ನೆನಪುಗಳ ಹೆಣ ತೇಲಿ ಹೋದರೂ
ಕೇವಲ ಅವನ ನೆನಪು ಮಾತ್ರ...
ಕೆಳ-ಕೆಳಗೆ ತಳಸೇರಿ..
ಚಿಪ್ಪಿನೊಳಗೇ ಬೆಳೆವ ಬೆಳಕಿನ ಬಿಂದುಗಳು.
ಮುತ್ತುಗಳು...! !