ಬುಧವಾರ, ಡಿಸೆಂಬರ್ 14, 2011

ಅಮ್ಮನಿಗೆ... ಪ್ರೀತಿಯಿಂದ...




"ಅಮ್ಮ, ಆಯಿ, ಅಬ್ಬೆ, ಅವ್ವ, ಮಾ...ಮಮ್ಮೀ..
ಒಂದೇ ತಾಯಿಗೆ ಎಷ್ಟೆಲ್ಲಾ  ಕಕ್ಕುಲತೆಯ ಕರೆಗಳು!..ಅವಳದು, ಅಷ್ಟೊಂದು ಥರದ ಪಾತ್ರಗಳು...!

ಅಮ್ಮನೆಂಬುವಳು   ಅನುಭವಿಸುವ ಸಂತಸ, ಹೆಮ್ಮೆ, ಸಹಿಸಿಕೊಳ್ಳಬೇಕಾದ ಆಯಾಸ, ನೋವು, ಒತ್ತಡ ಹಾಗೂ ಹೊರಬೇಕಾದ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವುದು   ಒಬ್ಬ ಅಮ್ಮನಿಗೆ ಮಾತ್ರ ಸಾಧ್ಯ ಅಥವಾ ಅಂಥದ್ದೇ ಅಮ್ಮನನ್ನು ಸೃಷ್ಟಿಸಿದ  'ಜನಪದ' ಕ್ಕೆ ಮಾತ್ರ..!

ಪ್ರತಿಯೊಬ್ಬ ಹೆಣ್ಣುಮಗಳ ಅದಮ್ಯ ಗಮ್ಯವೂ ತಾಯಿಯಾಗಬೇಕೆನ್ನುವುದೇ...ಇದು ಯಾರನ್ನೂ  ಬಿಟ್ಟಿದ್ದಲ್ಲ..ವಿಪರೀತ ಅಧುನಿಕ ಮನೋಭಾವದ , ಸ್ವತಂತ್ರ ವ್ಯಕ್ತಿತ್ವದ, career oriented  ಐಶ್ವರ್ಯ ರೈ,, ಅಂಜೆಲಿನಾ ಜೂಲಿಯಂಥ ಹೆಣ್ಣೂ ಕೂಡ, ತನ್ನಎಲ್ಲ  ಗುರಿ -ಆಕಾಂಕ್ಷೆಗಳ ಉನ್ಮಾದ ಬತ್ತಿದ ಮೇಲೆ ಬಯಸೋದು ತಾಯ್ತನವನ್ನೇ!....ಇದನ್ನೇ ಅರ್ಥಮಾಡಿಕೊಂಡು ಜನಪದ  ಮನೋಜ್ಞವಾಗಿ ಹೀಗೆ  ಚಿತ್ರಿಸಿರಬೇಕು....

"ಬಾಲಿಕರಿಲ್ಲದ ಬಾಲಿದ್ಯಾತರ ಜನ್ಮ
ಬಾಡಿಗೆ ಎತ್ತು ದುಡಿಧಾಂಗ...
ಬಾಳೆಲೆಯ ಹಾಸುಂಡು
ಬೀಸಿ ಒಗೆಧಾಂಗ..."

ಹೆಣ್ಣಿನ ಪಾಲಿಗೆ ಹೇಗಿದ್ದರೂ ಸರಿ.ಕೈ ಕಾಲು ಸರಿಯಾಗಿರುವ ಒಂದು ಮಗು ಬೇಕಷ್ಟೇ....ಅವಳ ಬಯಕೆ ಫಲಿಸಿ, ತನ್ನ ಗರ್ಭದಲ್ಲಿ ಮತ್ತೊಂದು ಜೀವ ಬೆಳೆಯುತ್ತಿದೆ ಅನ್ನುವಾಗ ಅವಳ ಸಂಭ್ರಮ, ಸಡಗರ ಅವಳಿಗೇ ಗೊತ್ತು...ಕರುಳ ಬಳ್ಳಿಯ ಪ್ರತಿ ಮಿಡಿತಕ್ಕೂ ದನಿಯಾಗುತ್ತಲೇ..ಪ್ರಸವವೆಂಬ ಘೋರ ನೋವನ್ನು ತಿನ್ನುತ್ತಲೇ ..ಮಗುವ ಮೊದಲ 'ಅಮ್ಮಾ' ಎನುವ ಅಳುವಿಗೆ ಎಲ್ಲವನ್ನೂ ಮರೆಯುವ, ತನ್ನ ನೋವು ಮರೆತು ಅಳುವ ಕಂದನನ್ನು ಎದೆಗೊತ್ತಿ ತಲೆ ನೇವರಿಸಿ,  ನಲಿಯುವ ಶಕ್ತಿ ಇರೋದು ತಾಯಿಗೆ ಮಾತ್ರ ತಾನೇ?
 ಮಗು ಮೊಟ್ಟಮೊದಲ ಬಾರಿಗೆ  ತನ್ನ  ಅಂಬೆಗಾಲಿಕ್ಕಿ ಹೊಸ್ತಿಲ ದಾಟಿದಾಗ, ಮೆತ್ತಗಿನ ಮುದ್ದೆ ಅನ್ನವನ್ನು ತುತ್ತು ತುತ್ತೆ ಗುಳುಂ ಎಂದು ನುಂಗತೊಡಗಿದಾಗ, ತೊದಲ್ನುಡಿಯಲ್ಲಿ ಅಮ್ಮಾ, ಆಯೀ ಎಂದು ಕೂಗುಹಾಕಿ ಕೇಕೆ ಹಾಕಿ ನಕ್ಕಾಗ , ಅಮ್ಮನ ಹೃದಯ  ಸಾರ್ಥಕ್ಯದ ಉತ್ತುಂಗದಲ್ಲಿರುತ್ತದೆ.. 
ಕೂಸು ಇದ್ದ ಮನಿಗೆ ಬೀಸಣಿಕೆ   ಯಾಕಯ್ಯ
ಕೂಸು ಕಂದವ್ವ ಒಳಹೊರಗ..ಆಡಿದರ
 ಬೀಸಣಿಕೆ ಗಾಳಿ ಸುಳಿದಾಂಗ...ಎಂದು ಮನದುಂಬಿ ಹಾಡುವಳು ಅದೇ ಅಮ್ಮ...

ತಾಯಿಯ ಹಿತವಾದ ಆರೈಕೆಯಲ್ಲಿ ದಿನದಿನಕ್ಕೆ ಬೆಳೆದು ನಿಲ್ಲುವ ಮಗುವಿಗೆ ತೊಟ್ಟಿಲು ಬಂಧ ಎನ್ನಿಸತೊಡಗುತ್ತದೆ.. .ಅದು ನೆರೆಹೊರೆಯುವರೊಂದಿಗೆ, ಪ್ರಾನಿಪಕ್ಷಿಗಳೊಂದಿಗೆ,ಕಲ್ಲು-ಮಣ್ಣಿನೊಂದಿಗೆ,ನೀರು-ಮುಗಿಲಿನೊಂದಿಗೆ ಆಡುತ್ತ ಬೆಳೆಯಲು ಹವಣಿಸುತ್ತದೆ...ತಲೆಯ ಮೇಲಿನ ವಿಶಾಲವಾದ ನೀಲಾಕಾಶದೆಗೆ ಆಕರ್ಷಿತಗೊಂಡು ಮುಖ ಮೇಲೆ ನಡೆಯುತ್ತಾ  ತಪ್ಪು ಹೆಜ್ಜೆಯಿಟ್ಟು ಬಿದ್ದು ಅಳಲಾರಂಭಿಸಿದಾಗ ..ಅಡುಗೆ ಮನೆಯಲ್ಲಿದ್ದ ಅಮ್ಮ ಓಡಿಬಂದು ಮಗುವನ್ನು ಅಪ್ಪಿಕೊಂಡು..ಮಗುವಿನ ಕಣ್ಣನ್ನು ಒರೆಸುವಾಗಲೂ ..."ಅಳುವ ಕಂದನ ತುಟಿಯು ಹವಳದ ಕುಡಿ ಹಾಂಗ."...ಎನ್ನುವ ಮಮತಾಮಯಿ...ಮಗುವಿನ ಅಳು ಆಕೆಯಲ್ಲಿ ಬೇಸರವನ್ನಗಲೀ, ಅಸಹನೆಯನ್ನಾಗಲೀ ಮೂಡಿಸಲಾರದು...ಅಮ್ಮನ ಜೋಗುಳದಿಂದ ಹೂ ನಿದ್ದೆಗಿಳಿಯುವ ಮಗುವಿಗೆ  ಅಮ್ಮನ ಜೋಗುಳದ ಪ್ರಭಾವ ಎಷ್ತಿರುತ್ತದೆಯೆಂದರೆ ಮಗುವಿನ ಸುಪ್ತ ಮನಸ್ಸಿನಲ್ಲಾಗಲೇ ತನ್ನ ವ್ಯಕ್ತಿತ್ವವನ್ನು ಹೂವಿನಂತಾಗಿಸುವ ಸುಪ್ತ ಚೈತನ್ಯ ಒಡಮೂಡತೊಡಗಿರುತ್ತದೆ...

ಮುಂದೆ ಶಾಲೆ-ಕಾಲೇಜು ಅಭ್ಯಾಸ ಪೂರೈಸಿದ ಮಗ ಅಥವಾ ಮಗಳು ಒಂದು ಉತ್ತಮ ನೌಕರಿ ಅಂತ ಸಂಪಾದಿಸಿಕೊಂಡು ದುಡಿಯ ಹತ್ತಿದಾಗಲೂ ಕೂಡ ಅಮ್ಮ ಅವರ ಬಗೆಗಿನ ಚಿಂತೆ ನಿಲ್ಲಿಸಲಾರಳು...ಆದಷ್ಟು ಬೇಗನೆ ಮಗನಿ(ಳಿ)ಗೊಂದು ಒಳ್ಳೆಯ ಹುಡುಗ(ಗಿ) ಸಿಕ್ಕಿ  ಮದುವೆಯಾಗಿ ಅವರ ಜೀವನ ಚನ್ನಗಿರಲಪ್ಪಾ  ಶಿವನೇ ಅಂತ ಪ್ರಾರ್ಥಿಸುವುದನ್ನು  ಬಿಡಲಾರಲು... 
ಜೀವಮಾನದಲ್ಲೆಂದೂ ಮಕ್ಕಳನ್ನು ಹೊರತುಪಡಿಸಿದ ಸೌಂದರ್ಯ, ಸುಖ-ನೆಮ್ಮದಿಗಳನ್ನು ಆಕೆ ಕನಸಿನಲ್ಲೂ ಕಲ್ಪಿಸಿಕೊಂಡಿರುವುದಿಲ್ಲ...

ಆದರೆ...ಮಕ್ಕಳು..ಬೆಳೆಯುತ್ತಿದ್ದಂತೆ..ಅಮ್ಮನ ಬಂಧದಿಂದ ಬಿಡಿಸಿಕೊಳ್ಳಲು ಹವಣಿಸುತ್ತಾರೆ...'ಅಮ್ಮ,ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತ್ತಿರುವೆ ನಾನು" ಎಂದು ಕಾಣದ ತೀರದ ಓಟಕ್ಕೆ ಅಣಿಯಾಗುತ್ತಾರೆ..ಅವರ ಕೆಲವೊಂದು ಮಾತಿನಲ್ಲಿ ಅಷ್ಟೊಂದು ವರ್ಷದಿಂದ ಜತನದಿಂದ ಸಾಕಿದ ಅಮ್ಮನ ಪ್ರೀತಿಗೆ ಏಟು ಬೀಳತೊಡಗುತ್ತದೆ...ಅಮ್ಮನ ಎದೆಯ ಗೂಡ ಒಳಗಿಂದ ಮಗು ಎಂಬ ಗುಬ್ಬಿ 'ಚೀಂವ್ ಚೀಂವ್ ' ಎಂದು ರೆಕ್ಕೆ ಬಿಚ್ಚಿ ಹಾರಿ ಹೋಗುವುದನ್ನು ನೋಡಿ ಕಣ್ಣು ತುಂಬಿ ಬರುತ್ತದೆ..ಆದರೂ...
"ಎಲ್ಲಾದರೂ ಇರಲವ್ವ
ಹುಲ್ಲಾಗಿ ಬೆಳೆಯಲಿ..
ನೆಲ್ಲಿ ಬಡ್ಯಾಗಿ ಚಿಗಿಯಲಿ..
ನನ ಮಗ
ಜಯವಂತನಾಗಿ ಬೆಳೆಯಾಲಿ".ಎಂದೇ ಹರಸುತ್ತಾಳೆ...

ದಿನ ಕಳೆಯುತ್ತದೆ... ಮಕ್ಕಳೂ ಬೆಳೆದು ತಂದೆ-ತಾಯಿ ಆಗುತ್ತಾರೆ...same to  same ... ಅಮ್ಮನ ಕಷ್ಟ ಸಹನೆ, ಪ್ರೀತಿ ಎಲ್ಲದರ ಮಹತ್ವ ತಿಳಿಯತೊಡಗುತ್ತದೆ..ಅಮ್ಮನಿಗೆ ಥ್ಯಾಂಕ್ಸ್ ಹೇಳೋಣ ಅಂತ ತುಂಬಾ ಸಾರಿ ಅಂದ್ಕೊತ್ತಾರೆ..ಆದರೆ ಏನೋ ಒಂಥರಾ  ಸಂಕೋಚ...ಹೀಗೆ ಕಾಲ ಕಳೆಯುತ್ತದೆ ..ಅಮ್ಮ ಎನ್ನಿಸಿಕೊಂದವಳು ಅದೊಂದು ದಿನ ತನ್ನ ಭೌತಿಕ ದೇಹವನ್ನು ಬಿಟ್ಟು ,ಮಮತೆಯನ್ನು ಮಾತ್ರ ಉಳಿಸಿ ನಡೆದು ಬಿಡುತ್ತಾಳೆ...ಮರಳಿ ಬರಲಾರದ ಊರಿಗೆ..ಮಕ್ಕಳೂ ನೋಡುತ್ತಲೇ ಇರುತ್ತಾರೆ..ಅಸಹಾಯಕರಂತೆ... ...ಅಮ್ಮನನ್ನು ಇನ್ನೂ ಚನ್ನಾಗಿ ನೋಡ್ಕೊಬಹುದಿತ್ತು  ..ಪ್ರೀತಿಸಬಹುದಿತ್ತು...ಇನ್ನೂ ಏನೇನೋ...ಗೊತ್ತಿಲ್ಲದ guilt ನೊಂದಿಗೆ..

ಮೊನ್ನೆ, ನನ್ನ ಬೆಸ್ಟ್ ಫ್ರೆಂಡ್ ನ ಅಮ್ಮ ಆಕಸ್ಮಿಕವಾಗಿ ಮರಣ ಹೊಂದಿದರು...ನನ್ನ ಸ್ನೇಹಿತರ ಮೆಸೇಜ್ ಹೀಗಿತ್ತು.."ಸಾರೀ... ನಾನೇನೂ ಮಾತಾಡುವ ಸ್ಥಿತಿಯಲ್ಲಿ ಇಲ್ಲ...ಯಾಕೆಂದರೆ ನನಗೆ ಅಮ್ಮ ಇಲ್ಲ"..ಅವರ ಮೆಸೇಜ್ ನನಗೆ ನಿಜವಾಗಿಯೂ ಒಂದು ಥರದ "eye opener"..ಕೂಡಲೇ ಅಮ್ಮನಿಗೆ ಫೋನಾಯಿಸಿದೆ..'ಅಮ್ಮ ನಂಗೆ ನಿನ್ನ ನೋಡಬೆಕೆನ್ಸ್ತಿದೆ..ಇಂದೇ ಹೊರಡ್ತಾ ಇದ್ದೀನಿ ' ಅವತ್ತು ಹೊರಟವಳು, ಮರುದಿನ ಮನೆ ತಲುಪಿ ಒಮ್ಮೆ ಅಮ್ಮನ ಸೆರಗು ಹಿಡ್ಕೊಂಡೆ...ಅಮ್ಮ ಸಾರೀ ಅಂದೆ...ಹುಬ್ಬೇರಿಸಿದಳು ಅಮ್ಮ.ಯಾಕೆ ? ಅನ್ನುವಂತೆ..ನಿನಗೆ ಯಾವಾಗಾದ್ರೂ ಬೇಜಾರು ಮಾಡಿದ್ದರೆ.."ಸುಮ್ಮನಿರು ಸಾಕು"ಅಂದಳು ಅಮ್ಮ...ಎರಡು ಮಕ್ಕಳಾದ ಮೇಲೆ ನನ್ನ ಮಗಳು ದೊಡ್ಡವಳಾದಳು ಎನ್ನುತ್ತಾ ಜೋರಾಗಿ ನಕ್ಕಾಗ ..ಮನ ಶಾಂತವಾಯಿತು...

ಮೇಲೆ ಹಾರಿ ನಿನ್ನ ಸೆಳೆತ ಮೀರಿ..
ನಿರ್ಭಾರ ಸ್ಥಿತಿಗೆ ತಲುಪಿ..ಬ್ರಹ್ಮಾಂಡವನ್ನೇ  ಬೆದಕಿ..
ಇಂಧನ ತೀರಲು, ಬಂದೆ ಬರುವೆನು...ಮತ್ತೆ ನಿನ್ನ ತೊಡೆಗೆ..
ಮೂರ್ತ ಪ್ರೇಮದೆಡೆಗೆ....
..

1 ಕಾಮೆಂಟ್‌: